ಇನ್ನೂ 6 ತಿಂಗಳು ಕೊರೊನಾಗೆ ಲಸಿಕೆ ಸಿಗಲ್ಲ: ವಿಶ್ವ ಆರೋಗ್ಯ ಸಂಸ್ಥೆ

ನವದೆಹಲಿ: ವಿಶ್ವದಾದ್ಯಂತ ಸಂಶೋಧನಾ ಸಂಸ್ಥೆಗಳು ಮತ್ತು ಸಾಂಕ್ರಾಮಿಕ ರೋಗತಜ್ಞರು, ವಿಜ್ಞಾನಿಗಳು ನಡೆಸುತ್ತಿರುವ ಸಂಶೋಧನೆಗಳು ಯಶಸ್ವಿಯಾದರೂ ಕೂಡಾ ಇನ್ನೂ ಆರು ತಿಂಗಳು ಕೊರೊನಾವೈರಸ್ ಸೋಂಕಿಗೆ ಯಾವುದೇ ಲಸಿಕೆ ಅಥವಾ ಔಷಧಿ ಸಿಗುವುದು ಕಷ್ಟಸಾಧ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ತಿಳಿಸಿದೆ.
ನ್ಯಾಯಯುತವಾಗಿ ಲಸಿಕೆ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ. ಆದರೆ ಇದರ ನಡುವೆ ಕೊರೊನಾವೈರಸ್ ಹರಡುವುದನ್ನು ನಿಗ್ರಹಿಸುವುದು ಸವಾಲಿನ ಕೆಲಸವಾಗಿದೆ. ಏಕೆಂದರೆ ಪ್ರತಿನಿತ್ಯ ಸೋಂಕಿತ ಪ್ರಕರಣಗಳ ಸಂಖ್ಯೆಯು ದಾಖಲೆಯ ಮಟ್ಟದಲ್ಲಿ ಏರಿಕೆಯಾಗುತ್ತಿವೆ ಎಂದು ಡಬ್ಲ್ಯುಎಚ್‍ಒ ತುರ್ತು ಕಾರ್ಯಕ್ರಮಗಳ ಮುಖ್ಯಸ್ಥರಾದ ಮೈಕ್ ರಿಯಾನ್ ತಿಳಿಸಿದ್ದಾರೆ. ಜಗತ್ತಿನಾದ್ಯಂತ ಕೊರೊನಾವೈರಸ್ ಲಸಿಕೆ ಸಂಶೋಧನಾ ಕಾರ್ಯವು ಶರವೇಗದಲ್ಲಿ ಸಾಗುತ್ತಿವೆ. ಈಗಾಗಲೇ ಸಾಕಷ್ಟು ವ್ಯಾಕ್ಸಿನ್ ಗಳನ್ನು ಬಳಸಿಕೊಂಡು ಮೂರನೇ ಹಂತದ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಈ ಪೈಕಿ ಯಾವುದೇ ಒಂದು ವ್ಯಾಕ್ಸಿನ್ ಕೂಡಾ ವಿಫಲವಾಗಿಲ್ಲ. ಈ ಬೆಳವಣಿಗೆಯು ಹೊಸ ಆಶಾಭಾವನೆಯನ್ನು ಹುಟ್ಟು ಹಾಕಿದೆ. ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಔಷಧಿಯ ಸಂಶೋಧನೆಯು ಅಗತ್ಯವಾಗಿದೆ ಎಂದು ಮೈಕ್ ರಿಯಾನ್ ತಿಳಿಸಿದ್ದಾರೆ. ಕೊರೊನಾವೈರಸ್ ವಿರುದ್ಧ ಹೋರಾಡುವುದಕ್ಕೆ ಅಗತ್ಯ ಎನಿಸಿರುವ ಸಂಭಾವ್ಯ ಲಸಿಕೆಗಳಿಗೆ ಅನುಮತಿ ನೀಡುವುದು ಮತ್ತು ಅನುಮತಿಯನ್ನು ವಿಸ್ತರಿಸುವುದರ ಜೊತೆಗೆ ಲಸಿಕೆಯ ಉತ್ಪಾದನಾ ಸಾಮಥ್ರ್ಯದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ ಎಂದು ಮೈಕ್ ರಿಯಾನ್ ಹೇಳಿದ್ದಾರೆ. ಕೊರೊನಾವೈರಸ್ ಸೋಂಕು ಜಾಗತಿಕ ಮಟ್ಟದಲ್ಲಿ ಹರಡಿರುವುದರಿಂದ ಸಾರ್ವಜನಿಕವಾಗಿ ನ್ಯಾಯಯುತ ಹಂಚಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯು ಆದ್ಯತೆ ನೀಡುತ್ತದೆ. ಈಗಾಗಲೇ ಯುನೈಟೆಡ್ ನೇಷನ್ಸ್ ಆಫ್ ಅಮೆರಿಕಾದ ಸರ್ಕಾರವು ಪಿ-ಫಿಜರ್ ಇಂಕ್ ಮತ್ತು ಜರ್ಮನ್ ಬಯೋಟಿಕ್ ಸಂಸ್ಥೆಯು ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಮೇಲೆ ಲಕ್ಷ್ಯ ವಹಿಸಿದೆ. 100 ಬಿಲಿಯನ್ ಡೋಸ್ ಔಷಧಿಯನ್ನು ಖರೀದಿಸುವುದಕ್ಕೆ 1.9 ಬಿಲಿಯನ್ ಡಾಲರ್ ನೀಡಲು ಅಮೆರಿಕಾ ಸಿದ್ಧವಾಗಿದೆ. ಆದರೆ ಕೊವಿಡ್-19 ಲಸಿಕೆ ಕೇವಲ ಶ್ರೀಮಂತರಿಗೆ ಸೇರುವಂತದ್ದು ಅಲ್ಲ. ಈ ಲಸಿಕೆ ಬಡವರನ್ನೂ ತಲುಪಬೇಕು. ಆ ನಿಟ್ಟಿನಲ್ಲಿ ಡಬ್ಲ್ಯುಎಚ್‍ಒ ಲಕ್ಷ್ಯ ವಹಿಸಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮೈಕ್ ರಿಯಾನ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *